ಬೆಳ್ಳೂರು
ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ನಾಗಮಂಗಲದ ಉತ್ತರಕ್ಕೆ 16 ಕಿಮೀ ದೂರದಲ್ಲಿರುವ ಒಂದು ಪಟ್ಟಣ.  ಜನಸಂಖ್ಯೆ 5438 (1981).  13ನೆಯ ಶತಮಾನದ ಒಂದು ಶಾಸನದ ಪ್ರಕಾರ ಈ ಸ್ಥಳಕ್ಕೆ ಉದ್ಭವ ನರಸಿಂಹಪುರ ಎಂಬ ಹೆಸರಿತ್ತೆಂದು ತಿಳಿದುಬರುತ್ತದೆ.  ಇಲ್ಲಿ ಹಲವಾರು ಪ್ರಾಚೀನ ದೇವಾಲಯಗಳಿವೆ.  ಇಲ್ಲಿರುವ ಗೌರೇಶ್ವರ ದೇವಾಲಯ 1199ರಲ್ಲೂ ಮೂಲೆಸಿಂಗೇಶ್ವರ ದೇವಾಲಯ 1224ರಲ್ಲೂ ಮಾಧವರಾಯ ದೇವಾಲಯ 1284ರಲ್ಲೂ ಕಟ್ಟಿದ್ದು-ಇವೆಲ್ಲ ಹೊಯ್ಸಳ ಶೈಲಿಯಲ್ಲಿವೆ.  ಗೌರವೇಶ್ವರ ದೇವಾಲಯದ ಗೋಪುರದ ಮೇಲೆ ಹುಲಿಯನ್ನು ಕೊಲ್ಲುತ್ತಿರುವ ಸಳನ ಶಿಲ್ಪಿವಿದೆ.  ಈ ಊರಿನ ವಿಮಲನಾಥ ಬಸದಿ 17ನೆಯ ಶತಮಾನದಲ್ಲಿ ಕಟ್ಟಿದ ದ್ರಾವಿಡಶೈಲಿಯ ಕಟ್ಟಡ.  ವಿಮಲನಾಥ ವಿಗ್ರಹ ಪೀಠದ ಮೇಲೆ ಎರಡು ಶಾಸನಗಳಿವೆ.  ದ್ರಾವಿಡ ಶೈಲಿಯ ವೀರಭದ್ರ ಮತ್ತು ಕಲ್ಲೇಶ್ವರ ದೇವಾಲಯಗಳೂ ಉಲ್ಲೇಖಾರ್ಹ.

	ಬೆಳ್ಳೂರಿನಲ್ಲಿ ಪುರಸಭಾಡಳಿತವಿದ್ದು, ಒಂದು ಪ್ರೌಢಶಾಲೆ ಇದೆ.  ಕನ್ನಡದ ಪ್ರಸಿದ್ಧ ಲೇಖದರಾದ ಬಿ. ಎಂ. ಶ್ರೀಕಂಠಯ್ಯನವರ (ಬಿ.ಎಂ.ಶ್ರೀ.) ಮೂಲ ಸ್ಥಳವಿದು.							
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ